We Believe JesusFé, Esperança e Nova Vida

2 ಸಮುಯೇಲ 19

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← 2 ಸಮುಯೇಲ 18 2 ಸಮುಯೇಲ 2 ಸಮುಯೇಲ 20 →

1“ಅರಸನು ಅಬ್ಷಾಲೋಮನಿಗೋಸ್ಕರ ಅತ್ತು ದುಃಖ ಪಡುತ್ತಾ ಇದ್ದಾನೆ,” ಎಂದು ಯೋವಾಬನಿಗೆ ತಿಳಿಸಲಾಯಿತು.

2“ಅರಸನು ತನ್ನ ಮಗನಿಗೋಸ್ಕರ ವ್ಯಥೆಪಡುತ್ತಿದ್ದಾನೆ,” ಎಂದು ಎಲ್ಲ ಜನರಿಗೂ ಗೊತ್ತಾಗಿದ್ದರಿಂದ ಆ ವಿಜಯದ ದಿನವು ಸಮಸ್ತ ಜನರಿಗೆ ಗೋಳಾಟವಾಗಿ ಮಾರ್ಪಟ್ಟಿತು.

3ಆದ್ದರಿಂದ ಜನರು ಯುದ್ಧದಲ್ಲಿ ಓಡಿಹೋಗಿ ಅವಮಾನ ಪಟ್ಟು ಬರುವ ಕಳ್ಳರ ಹಾಗೆ ಪಟ್ಟಣದೊಳಗೆ ಬಂದರು.

4ಆದರೆ ಅರಸನು ಮೋರೆಯನ್ನು ಮುಚ್ಚಿಕೊಂಡು, ಮಹಾಶಬ್ದವಾಗಿ, “ನನ್ನ ಮಗ ಅಬ್ಷಾಲೋಮನೇ, ಅಬ್ಷಾಲೋಮನೇ ನನ್ನ ಮಗನೇ, ನನ್ನ ಮಗನೇ,” ಎಂದು ಕೂಗುತ್ತಿದ್ದನು.

5ಆಗ ಯೋವಾಬನು ಮನೆಯೊಳಗೆ ಅರಸನ ಬಳಿಗೆ ಬಂದು, ಅವನಿಗೆ, “ನಿನ್ನ ಪ್ರಾಣವನ್ನೂ, ನಿನ್ನ ಪುತ್ರಪುತ್ರಿಯರ ಪ್ರಾಣಗಳನ್ನೂ, ನಿನ್ನ ಹೆಂಡತಿಯರ ಮತ್ತು ಉಪಪತ್ನಿಯರ ಪ್ರಾಣಗಳನ್ನೂ ರಕ್ಷಿಸಿದ ನಿನ್ನ ಸೇವಕರನ್ನು ಈ ಹೊತ್ತು ನಾಚಿಕೆಪಡಿಸಿದ್ದೀ.

6ನೀನು ನಿನ್ನ ಹಗೆಯವರನ್ನು ಪ್ರೀತಿಮಾಡಿ, ನಿನ್ನನ್ನು ಪ್ರೀತಿಸುವವರನ್ನು ಹಗೆ ಮಾಡಿದ್ದರಿಂದ ಸೇನಾಧಿಪತಿಗಳನ್ನೂ, ಸೈನಿಕರನ್ನೂ ನಿನಗೆ ಏನೂ ಅಲ್ಲವೆಂದು ಈಗ ತಿಳಿಯಮಾಡಿದಿ. ಈ ಹೊತ್ತು ನಾವೆಲ್ಲರೂ ಸತ್ತು ಅಬ್ಷಾಲೋಮನು ಬದುಕಿದ್ದರೆ, ನಿನಗೆ ಸಂತೋಷವಾಗುತ್ತಿತ್ತು ಎಂದು ನನಗೆ ಅನಿಸುತ್ತದೆ.

7ಈಗ ನೀನು ಎದ್ದು ಹೊರಟುಬಂದು, ನಿನ್ನ ಸೈನಿಕರ ಸಂಗಡ ಸಮಾಧಾನವಾಗಿ ಮಾತನಾಡು. ನೀನು ಹೊರಗೆ ಬಾರದೆ ಇದ್ದರೆ, ಈ ರಾತ್ರಿಯಲ್ಲಿ ಒಬ್ಬರಾದರೂ ನಿನ್ನ ಸಂಗಡ ಇರುವುದಿಲ್ಲವೆಂದು ಯೆಹೋವ ದೇವರ ಮೇಲೆ ಆಣೆ ಇಟ್ಟು ಹೇಳುತ್ತೇನೆ. ಆಗ ನಿನ್ನ ಯೌವನಕಾಲದಿಂದ ಈ ದಿನದವರೆಗೂ ನಿನಗೆ ಬಂದ ಸಮಸ್ತ ಕೇಡಿಗಿಂತ ಅದು ಅಧಿಕ ಕೇಡಾಗಿರುವುದು,” ಎಂದನು.

8ಆಗ ಅರಸನು ಎದ್ದು ಹೋಗಿ ಬಾಗಿಲಲ್ಲಿ ಕುಳಿತನು. “ಅರಸನು ಬಾಗಿಲಲ್ಲಿ ಕುಳಿತಿದ್ದಾನೆ,” ಎಂದು ಸಮಸ್ತ ಸೈನಿಕರಿಗೆ ತಿಳಿದಿದ್ದರಿಂದ, ಸೈನಿಕರೆಲ್ಲರೂ ಅರಸನ ಎದುರಿಗೆ ಬಂದರು.

9ಇಸ್ರಾಯೇಲಿನ ಎಲ್ಲಾ ಕುಲಗಳಲ್ಲಿ ಸಮಸ್ತ ಜನರು ತಮ್ಮೊಳಗೆ ಜಗಳ ಮಾಡುತ್ತಾ, “ನಮ್ಮ ಶತ್ರುಗಳ ಕೈಯಿಂದ ನಮ್ಮನ್ನು ವಿಮೋಚನೆ ಮಾಡಿದವನು ಅರಸನೇ, ಫಿಲಿಷ್ಟಿಯರ ಕೈಯಿಂದ ನಮ್ಮನ್ನು ವಿಮೋಚನೆ ಮಾಡಿದವನು ಅರಸನೇ, ಆದರೆ ಈಗ ಅಬ್ಷಾಲೋಮನಿಗೋಸ್ಕರ ದೇಶವನ್ನು ಬಿಟ್ಟು ಓಡಿಹೋಗಿದ್ದಾನೆ.

10ನಮ್ಮನ್ನು ಆಳಲು ನಾವು ಅಭಿಷೇಕಿಸಿದ ಅಬ್ಷಾಲೋಮನು ಯುದ್ಧದಲ್ಲಿ ಸತ್ತನು. ನಾವು ಈಗ ಅರಸನನ್ನು ತಿರುಗಿ ಕರೆದುಕೊಂಡು ಬಾರದೆ, ಸುಮ್ಮನೆ ಇರುವುದು ಏಕೆ?” ಎಂದರು.

11ಆಗ ಅರಸನಾದ ದಾವೀದನು ಯಾಜಕರಾದ ಚಾದೋಕನ ಬಳಿಗೂ, ಅಬಿಯಾತರನ ಬಳಿಗೂ ಸೇವಕರನ್ನು ಕಳುಹಿಸಿ, “ನೀವು ಯೆಹೂದದ ಹಿರಿಯರಿಗೆ, ‘ಸಮಸ್ತ ಇಸ್ರಾಯೇಲಿನ ಮಾತು ಅರಸನಿಗೆ ಅವನ ಅರಮನೆಯಲ್ಲಿಯೇ ತಿಳಿದಿರುವಾಗ, ಅರಸನನ್ನು ಅವನ ಮನೆಗೆ ತಿರುಗಿ ಕರೆದುಕೊಂಡು ಬರುವಂತೆ ನೀವು ಹಿಂಜರಿದದ್ದೇನು?

12ನೀವು ನನ್ನ ಸಹೋದರರೂ, ನನ್ನ ರಕ್ತವೂ, ನನ್ನ ಮಾಂಸವೂ ಆಗಿದ್ದೀರಿ. ಹಾಗಾದರೆ ಅರಸನನ್ನು ತಿರುಗಿ ಬರಮಾಡುವಂತೆ ನೀವು ಹಿಂಜರಿದದ್ದೇನು?’ ಎಂದು ತಿಳಿಸಿರಿ.

13ಇದಲ್ಲದೆ ನೀವು ಅಮಾಸನಿಗೆ, ‘ನೀನು ನನ್ನ ರಕ್ತವೂ, ನನ್ನ ಮಾಂಸವೂ ಅಲ್ಲವೋ? ನೀನು ಯೋವಾಬನಿಗೆ ಬದಲಾಗಿ ಯಾವಾಗಲೂ ನನ್ನ ಮುಂದೆ ಸೈನ್ಯದ ಪ್ರಧಾನನಾಗಿರದೆ ಹೋದರೆ, ದೇವರು ನನಗೆ ಏನಾದರೂ ಮಾಡಲಿ,’ ಎಂದು ಹೇಳಿರಿ,” ಎಂದನು.

14ಅರಸನು ಸಕಲ ಯೆಹೂದ ಜನರ ಹೃದಯವನ್ನು ಸಂಪೂರ್ಣವಾಗಿ ಗೆದ್ದುಕೊಂಡದ್ದರಿಂದ, ಅವರು ಅರಸನಿಗೆ, “ನೀನೂ, ನಿನ್ನ ಸಮಸ್ತ ಸೇವಕರೂ ತಿರುಗಿ ಬನ್ನಿರಿ,” ಎಂದು ಹೇಳಿ ಕಳುಹಿಸಿದರು.

15ಅರಸನು ತಿರುಗಿ ಯೊರ್ದನಿನವರೆಗೂ ಬಂದನು.

16ಬಹುರೀಮಿನವನೂ ಬೆನ್ಯಾಮೀನ್ಯನೂ ಗೇರನ ಮಗ ಶಿಮ್ಮಿಯು ತ್ವರೆಯಾಗಿ ಯೆಹೂದ ಜನರ ಸಂಗಡ ಅರಸ ದಾವೀದನನ್ನು ಎದುರುಗೊಳ್ಳುವುದಕ್ಕೆ ಬಂದನು.

17ಅವನ ಸಂಗಡ ಬೆನ್ಯಾಮೀನ್ಯರಾದ ಸಾವಿರ ಜನರೂ, ಸೌಲನ ಮನೆಯ ಸೇವಕ ಚೀಬನೂ, ಅವನ ಸಂಗಡ ಹದಿನೈದು ಮಂದಿ ಪುತ್ರರೂ, ಅವನ ಇಪ್ಪತ್ತು ಮಂದಿ ಸೇವಕರೂ ಯೊರ್ದನನ್ನು ದಾಟಿ, ಅರಸನಿಗೆ ಎದುರಾಗಿ ಬಂದರು.

18ಅರಸನ ಮನೆಯವರನ್ನು ಈಚೆ ದಡಕ್ಕೆ ತರುವುದಕ್ಕೂ, ಅವನ ದೃಷ್ಟಿಗೆ ಒಳ್ಳೆಯದಾಗಿ ತೋರಿಸಿದ್ದನ್ನು ಮಾಡುವುದಕ್ಕೂ ಯೊರ್ದನನ್ನು ದಾಟಿ ಬಂದರು.

19“ನನ್ನ ಒಡೆಯನೇ, ನನ್ನ ಅಕ್ರಮವನ್ನು ಎಣಿಸದೆ ಅರಸನಾದ ನನ್ನ ಒಡೆಯನು ಯೆರೂಸಲೇಮಿನಿಂದ ಹೊರಟು ಬರುವ ದಿವಸದಲ್ಲಿ ತನ್ನ ದಾಸನು ಮೂರ್ಖತನದಿಂದ ಮಾಡಿದ ಕಾರ್ಯವನ್ನು ನೆನಸದೆ, ಅದನ್ನು ತನ್ನ ಹೃದಯದಲ್ಲಿ ಇಡದೆ ಇರಲಿ.

20ಏಕೆಂದರೆ ಪಾಪ ಮಾಡಿದೆನೆಂದು ನಿನ್ನ ಸೇವಕನಾಗಿರುವ ನಾನು ತಿಳಿದಿದ್ದೇನೆ. ಆದ್ದರಿಂದ ಇಗೋ, ನಾನು ಅರಸನಾದ ನನ್ನ ಒಡೆಯನನ್ನು ಎದುರುಗೊಳ್ಳಲು ಯೋಸೇಫ್ಯರಲ್ಲಿ ಎಲ್ಲರಿಗಿಂತ ಮುಂದಾಗಿ ಈ ದಿನ ಬಂದಿದ್ದೇನೆ,” ಎಂದನು.

21ಆಗ ಚೆರೂಯಳ ಮಗ ಅಬೀಷೈಯನು ಉತ್ತರವಾಗಿ, “ಯೆಹೋವ ದೇವರ ಅಭಿಷಿಕ್ತನನ್ನು ಶಿಮ್ಮಿಯು ಶಪಿಸಿದ್ದರಿಂದ, ಅದಕ್ಕಾಗಿ ಅವನಿಗೆ ಮರಣದಂಡನೆ ಆಗಬೇಕಲ್ಲವೆ?” ಎಂದನು.

22ಆದರೆ ದಾವೀದನು, “ಚೆರೂಯಳ ಮಕ್ಕಳೇ, ಈ ಹೊತ್ತು ನೀವು ನನಗೆ ಶತ್ರುಗಳಾಗಿರುವ ಹಾಗೆ ನಿಮ್ಮೊಂದಿಗೆ ನನಗೆ ಏನು? ಈ ಹೊತ್ತು ಇಸ್ರಾಯೇಲಿನಲ್ಲಿ ಯಾರಿಗೂ ಮರಣದಂಡನೆ ಆಗಬಾರದು, ಏಕೆಂದರೆ ಈ ಹೊತ್ತು ನಾನು ಇಸ್ರಾಯೇಲಿನ ಮೇಲೆ ಅರಸನಾಗಿದ್ದೇನೆಂದು ಗೊತ್ತಾಯಿತಲ್ಲಾ?” ಎಂದನು.

23ಆಗ ಅರಸನು ಶಿಮ್ಮಿಗೆ, “ನೀನು ಸಾಯುವುದಿಲ್ಲ,” ಎಂದು ಅವನಿಗೆ ಆಣೆ ಇಟ್ಟನು.

24ಸೌಲನ ಮೊಮ್ಮಗ ಮೆಫೀಬೋಶೆತನು ಅರಸನನ್ನು ಎದುರುಗೊಳ್ಳಲು ಬಂದನು. ಅರಸನು ಹೋದಂದಿನಿಂದ ಅವನು ಮರಳಿ ಸಮಾಧಾನವಾಗಿ ಬರುವವರೆಗೂ ಅವನು ತನ್ನ ಪಾದಗಳನ್ನು ಕಟ್ಟಿಕೊಳ್ಳಲಿಲ್ಲ, ಗಡ್ಡವನ್ನು ಕತ್ತರಿಸಿರಲಿಲ್ಲ, ಬಟ್ಟೆಯನ್ನು ಒಗೆಸಿಕೊಂಡಿರಲಿಲ್ಲ.

25ಅವನು ಯೆರೂಸಲೇಮಿನಿಂದ ಅರಸನನ್ನು ಎದುರುಗೊಳ್ಳಲು ಬಂದಾಗ, ಅರಸನು ಅವನಿಗೆ, “ಮೆಫೀಬೋಶೆತನೇ, ನೀನು ಏಕೆ ನನ್ನ ಸಂಗಡ ಬಾರದೆ ಹೋದೆ?” ಎಂದನು.

26ಅದಕ್ಕವನು, “ಅರಸನಾದ ನನ್ನ ಒಡೆಯನೇ, ನನ್ನ ಸೇವಕನು ನನ್ನನ್ನು ಮೋಸ ಮಾಡಿದನು. ಏಕೆಂದರೆ ನಿನ್ನ ಸೇವಕನು ಕುಂಟನಾಗಿರುವುದರಿಂದ ಒಂದು ಕತ್ತೆಯ ಮೇಲೆ ತಡಿಯನ್ನು ಹಾಕಿ, ಅದರ ಮೇಲೇರಿ ಅರಸನ ಸಂಗಡ ಹೋಗುವೆನೆಂದು ನಿನ್ನ ಸೇವಕನಾದ ನಾನು ಅವನಿಗೆ ಹೇಳಿದೆನು.

27ಅವನು ಅರಸನಾದ ನನ್ನ ಒಡೆಯನಿಗೆ ನಿನ್ನ ಸೇವಕನ ಮೇಲೆ ಚಾಡಿಯನ್ನು ಹೇಳಿದನು. ಆದರೆ ಅರಸನಾದ ನನ್ನ ಒಡೆಯನು ದೇವದೂತನ ಹಾಗೆಯೇ ಇದ್ದಾನೆ. ನಿನ್ನ ದೃಷ್ಟಿಗೆ ಒಳ್ಳೆಯದಾಗಿರುವುದನ್ನು ಮಾಡು.

28ಏಕೆಂದರೆ ಅರಸನಾದ ನನ್ನ ಒಡೆಯನಿಗೆ ನನ್ನ ತಂದೆಯ ಮನೆಯವರೆಲ್ಲರೂ ಸತ್ತವರಾಗಿ ಇದ್ದರೂ, ನಿನ್ನ ಮೇಜಿನಲ್ಲಿ ಭೋಜನ ಮಾಡುವವರೊಳಗೆ ನಿನ್ನ ಸೇವಕನನ್ನು ಇಟ್ಟಿ. ನಾನು ಇನ್ನು ಅರಸನಿಗೆ ಹೆಚ್ಚು ಮೊರೆಯಿಡುವುದಕ್ಕೆ ಯೋಗ್ಯನೋ?” ಎಂದನು.

29ಆಗ ಅರಸನು ಅವನಿಗೆ, “ಇನ್ನು ನಿನ್ನ ಕಾರ್ಯಗಳನ್ನು ಕುರಿತು ಮಾತನಾಡುವುದೇನು? ನೀನೂ, ಚೀಬನೂ ಭೂಮಿಯನ್ನು ಪಾಲು ಹಂಚಿಕೊಳ್ಳಿರಿ ಎಂದು ಹೇಳಿದ್ದೇನೆ,” ಎಂದನು.

30ಮೆಫೀಬೋಶೆತನು ಅರಸನಿಗೆ, “ಹೌದು, ಅರಸನಾದ ನನ್ನ ಒಡೆಯನು ಸಮಾಧಾನದಿಂದ ತಿರುಗಿ ತನ್ನ ಮನೆಗೆ ಬಂದದ್ದೇ ಸಾಕು. ಅವನೇ ಸಮಸ್ತವನ್ನು ತೆಗೆದುಕೊಳ್ಳಲಿ,” ಎಂದನು.

31ಇದಲ್ಲದೆ ಗಿಲ್ಯಾದ್ಯನಾದ ಬರ್ಜಿಲ್ಲೈಯು ರೋಗೆಲೀಮಿನಿಂದ ಅರಸನನ್ನು ಯೊರ್ದನ್ ದಾಟಿಸಲು ಮತ್ತು ಅಲ್ಲಿಂದ ಅವನನ್ನು ಕಳುಹಿಸಲು ಬಂದನು.

32ಈ ಬರ್ಜಿಲ್ಲೈಯು ಎಂಬತ್ತು ವರ್ಷದವನಾಗಿ ಮಹಾವೃದ್ಧನಾಗಿದ್ದನು. ಅರಸನು ಮಹನಯಿಮಿನಲ್ಲಿ ವಾಸಿಸಿಸುವವರೆಗೂ ಇವನು ಅರಸನನ್ನು ಸಂರಕ್ಷಿಸಿದನು. ಏಕೆಂದರೆ ಅವನು ಬಹು ಸಿರಿವಂತ ಮನುಷ್ಯನಾಗಿದ್ದನು.

33ಆದ್ದರಿಂದ ಅರಸನು ಬರ್ಜಿಲ್ಲೈಗೆ, “ನೀನು ನನ್ನ ಸಂಗಡ ಬಾ, ಯೆರೂಸಲೇಮಿನಲ್ಲಿ ನಿನ್ನನ್ನು ನನ್ನ ಬಳಿಯಲ್ಲಿ ಸಂರಕ್ಷಿಸುವೆನು,” ಎಂದನು.

34ಆದರೆ ಬರ್ಜಿಲ್ಲೈಯು ಅರಸನಿಗೆ, “ನಾನು ಅರಸನ ಸಂಗಡ ಯೆರೂಸಲೇಮಿಗೆ ಹೋಗುವಹಾಗೆ ನಾನು ಬದುಕುವ ವರುಷ ಎಷ್ಟು ಉಂಟು?

35ನಾನು ಈ ಹೊತ್ತು ಎಂಬತ್ತು ವರ್ಷದವನು. ಇನ್ನು ಒಳ್ಳೆಯದು ಕೆಟ್ಟದ್ದು ಎಂಬ ಭೇದ ತಿಳಿಯುವೆನೋ? ತಿನ್ನುವುದು, ಕುಡಿಯುವುದು ನಿನ್ನ ಸೇವಕನಿಗೆ ರುಚಿಕರವಾಗಿರುವುದೋ? ಗಾಯನ ಮಾಡುವ ಸ್ತ್ರೀಪುರುಷರ ಸ್ವರಗಳು ನನಗೆ ಕೇಳಿಸುತ್ತವೋ? ಹಾಗಾದರೆ ನಿನ್ನ ಸೇವಕನು ಅರಸನಾದ ನನ್ನ ಒಡೆಯನಿಗೆ ಏಕೆ ಇನ್ನು ಭಾರವಾಗಿರಬೇಕು?

36ನಿನ್ನ ಸೇವಕನು ಸ್ವಲ್ಪ ದೂರ ಯೊರ್ದನನ್ನು ದಾಟುವವರೆಗೂ ಅವರ ಅರಸನ ಸಂಗಡ ಬರುವನು. ಅದಕ್ಕೆ ಇಂಥಾ ಬಹುಮಾನ ಕೊಡುವುದೇನು?

37ಅಪ್ಪಣೆ ಆದರೆ ನಿನ್ನ ಸೇವಕನಾದ ನಾನು ತಿರುಗಿ ಹೋಗಿ, ನನ್ನ ಪಟ್ಟಣದಲ್ಲಿ ನನ್ನ ತಂದೆತಾಯಿಗಳ ಸಮಾಧಿಯ ಬಳಿಯಲ್ಲಿ ಸಾಯುತ್ತೇನೆ. ಆದರೆ ಅರಸನಾದ ನನ್ನ ಒಡೆಯನ ಸಂಗಡ ನಿನ್ನ ಸೇವಕನಾದ ನನ್ನ ಮಗ ಕಿಮ್ಹಾಮನು ಬರುವನು. ನಿನ್ನ ದೃಷ್ಟಿಗೆ ಒಳ್ಳೆಯದಾಗಿರುವುದನ್ನು ಅವನಿಗೆ ಮಾಡು,” ಎಂದನು.

38ಆಗ ಅರಸನು, “ಕಿಮ್ಹಾಮನು ನನ್ನ ಸಂಗಡ ಬರಲಿ; ನಿನ್ನ ದೃಷ್ಟಿಗೆ ಒಳ್ಳೆಯದಾಗಿರುವುದನ್ನು ನಾನು ಅವನಿಗೆ ಮಾಡುವೆನು. ನಿನಗೆ ನನ್ನಿಂದ ಬೇಕಾದದ್ದೆಲ್ಲಾ ಮಾಡುವೆನು,” ಎಂದನು.

39ಜನರೆಲ್ಲರೂ ಯೊರ್ದನನ್ನು ದಾಟಿದರು. ಅರಸನು ದಾಟಿ ಬಂದಾಗ, ಬರ್ಜಿಲ್ಲೈಯನ್ನು ಮುದ್ದಿಟ್ಟು ಅವನನ್ನು ಆಶೀರ್ವದಿಸಿದನು. ಅನಂತರ ಬರ್ಜಿಲ್ಲೈಯು ತನ್ನ ಸ್ಥಳಕ್ಕೆ ಹಿಂದಿರುಗಿದನು.

40ಅರಸನು ಗಿಲ್ಗಾಲಿಗೆ ಬಂದನು. ಹಾಗೆಯೇ ಅವನ ಸಂಗಡ ಕಿಮ್ಹಾಮನು ಬಂದನು. ಯೆಹೂದದ ಸೈನಿಕರೆಲ್ಲರೂ, ಇಸ್ರಾಯೇಲಿನ ಅರ್ಧ ಪಾಲು ಸೈನಿಕರೂ ಅರಸನನ್ನು ಕರೆದುಕೊಂಡು ಬಂದರು.

41ಇಸ್ರಾಯೇಲರೆಲ್ಲರೂ ಅರಸನ ಬಳಿಗೆ ಬಂದು ಅರಸನಿಗೆ, “ನಮ್ಮ ಸಹೋದರರಾದ ಯೆಹೂದದ ಮನುಷ್ಯರು ಕಳ್ಳತನವಾಗಿ ನಿನ್ನನ್ನು ಕರೆತಂದದ್ದೇನು? ಅರಸನನ್ನೂ, ಅವನ ಮನೆಯವರನ್ನೂ, ಅವನ ಸಂಗಡ ಇರುವ ದಾವೀದನ ಸಕಲ ಮನುಷ್ಯರನ್ನೂ ಯೊರ್ದನನ್ನು ದಾಟಿಸಿದ್ದೇನು?” ಎಂದರು.

42ಆಗ ಯೆಹೂದದವರೆಲ್ಲರೂ ಇಸ್ರಾಯೇಲರಿಗೆ ಉತ್ತರವಾಗಿ, “ಅರಸನು ನಮಗೆ ಸಮೀಪ ಬಂಧುವಾದುದರಿಂದ, ಈ ಕಾರ್ಯಕ್ಕೋಸ್ಕರ ನೀವು ಕೋಪಗೊಂಡಿರುವುದೇನು? ನಾವು ಅರಸನ ಖರ್ಚಿನಿಂದ ಏನಾದರೂ ಊಟ ಮಾಡಿದೆವೋ? ನಾವು ನಮಗಾಗಿ ಏನನ್ನಾದರೂ ತೆಗೆದುಕೊಂಡಿದ್ದೇವೆಯೇ?” ಎಂದರು.

43ಆದರೆ ಇಸ್ರಾಯೇಲರು ಯೆಹೂದ ಜನರಿಗೆ ಉತ್ತರವಾಗಿ, “ಅರಸನಲ್ಲಿ ನಮಗೆ ಹತ್ತು ಪಾಲು ಉಂಟು. ನಿಮಗಿಂತ ನಮಗೆ ದಾವೀದನ ಬಾಧ್ಯತೆಯು ಅಧಿಕವಾಗಿದೆ. ನಮ್ಮ ಅರಸನನ್ನು ತಿರುಗಿ ಕರೆದುಕೊಂಡು ಬರುವುದರ ವಿಷಯದಲ್ಲಿ ಮೊದಲು ಮಾತನಾಡಿದವರು ನಾವಲ್ಲವೋ? ಹಾಗಾದರೆ ನಮ್ಮನ್ನು ಏಕೆ ಅಲ್ಪರಾಗಿ ಎಣಿಸಿದಿರಿ?” ಎಂದರು.

← 2 ಸಮುಯೇಲ 18 2 ಸಮುಯೇಲ 2 ಸಮುಯೇಲ 20 →

2 ಸಮುಯೇಲ 19 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019