We Believe JesusFé, Esperança e Nova Vida

1 ಸಮುಯೇಲ 5

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← 1 ಸಮುಯೇಲ 4 1 ಸಮುಯೇಲ 1 ಸಮುಯೇಲ 6 →

1ಫಿಲಿಷ್ಟಿಯರು ದೇವರ ಮಂಜೂಷವನ್ನು ತೆಗೆದುಕೊಂಡು ಎಬೆನೆಜೆರಿನಿಂದ ಅಷ್ಡೋದಿಗೆ ತಂದರು.

2ಫಿಲಿಷ್ಟಿಯರು ದೇವರ ಮಂಜೂಷವನ್ನು ದಾಗೋನನ ಗುಡಿಗೆ ತೆಗೆದುಕೊಂಡುಹೋಗಿ, ದಾಗೋನನ ಪಕ್ಕದಲ್ಲಿಟ್ಟರು.

3ಅಷ್ಡೋದ್ಯರು ಮಾರನೆಯ ದಿವಸ ಎದ್ದಾಗ, ದಾಗೋನ್ ವಿಗ್ರಹ ಯೆಹೋವ ದೇವರ ಮಂಜೂಷದ ಮುಂದೆ ಬೋರಲು ಬಿದ್ದಿತ್ತು.

4ಆಗ ಅವರು ದಾಗೋನನನ್ನು ತೆಗೆದು, ಅದನ್ನು ಅದರ ಸ್ಥಳದಲ್ಲಿ ತಿರುಗಿ ಇಟ್ಟರು. ಅವರು ಮಾರನೆಯ ದಿವಸ ಬೆಳಿಗ್ಗೆ ಎದ್ದಾಗ, ದಾಗೋನ್ ಯೆಹೋವ ದೇವರ ಮಂಜೂಷದ ಮುಂದೆ ಬೋರಲು ಬಿದ್ದಿತ್ತು. ದಾಗೋನನ ತಲೆಯೂ ಅದರ ಎರಡು ಕೈಗಳೂ ಕತ್ತರಿಸಲಾಗಿ ಹೊಸ್ತಿಲ ಮೇಲೆ ಬಿದ್ದಿದ್ದವು.

5ಮುಂಡ ಮಾತ್ರ ಅದಕ್ಕೆ ಉಳಿದಿತ್ತು. ಆದ್ದರಿಂದ ಈ ದಿನದವರೆಗೂ ದಾಗೋನನ ಯಾಜಕರೂ, ದಾಗೋನನ ಗುಡಿಯನ್ನು ಪ್ರವೇಶಿಸುವವರೆಲ್ಲರೂ ಅಷ್ಡೋದಿನಲ್ಲಿರುವ ದಾಗೋನನ ಹೊಸ್ತಿಲನ್ನು ತುಳಿಯುವುದಿಲ್ಲ.

6ಯೆಹೋವ ದೇವರ ಕೈ ಅಷ್ಡೋದಿನವರ ಮೇಲೆ ಮಹಾ ಭಾರವಾಗಿತ್ತು. ಅವರನ್ನು ನಾಶಮಾಡಿ, ಅಷ್ಡೋದನ್ನೂ, ಅದರ ಮೇರೆಗಳನ್ನೂ ಗಡ್ಡೆರೋಗದಿಂದಲೂ ಬಾಧಿಸಿದರು.

7ಈ ಪ್ರಕಾರ ಸಂಭವಿಸಿದ್ದನ್ನು ಅಷ್ಡೋದಿನ ಜನರು ಕಂಡಾಗ, “ಇಸ್ರಾಯೇಲ್ ದೇವರ ಮಂಜೂಷವು ನಮ್ಮ ಬಳಿಯಲ್ಲಿ ಇರಬಾರದು. ಏಕೆಂದರೆ ಅವರ ಕೈ ನಮ್ಮ ಮೇಲೆಯೂ, ನಮ್ಮ ದೇವರಾದ ದಾಗೋನನ ಮೇಲೆಯೂ ಕಠಿಣವಾಗಿದೆ,” ಎಂದರು.

8ಅವರು ಫಿಲಿಷ್ಟಿಯರ ಅಧಿಪತಿಗಳೆಲ್ಲರನ್ನು ತಮ್ಮ ಬಳಿಗೆ ಕರೆಯಕಳುಹಿಸಿ ಅವರಿಗೆ, “ಇಸ್ರಾಯೇಲ್ ದೇವರ ಮಂಜೂಷವನ್ನು ಏನು ಮಾಡೋಣ?” ಎಂದರು. ಅದಕ್ಕವರು, “ಇಸ್ರಾಯೇಲ್ ದೇವರ ಮಂಜೂಷವು ಗತ್ ಊರಿಗೆ ಕಳುಹಿಸಬೇಕು,” ಎಂದರು.

9ಆದರೆ ಅವರು ಅದನ್ನು ತಂದ ತರುವಾಯ, ಯೆಹೋವ ದೇವರ ಕೈ ಆ ಪಟ್ಟಣದ ಮೇಲೆ ಬಂದು ಮಹಾ ನಾಶಮಾಡಿತು. ಇದಲ್ಲದೆ ಯೆಹೋವ ದೇವರು ಚಿಕ್ಕವರಿಂದ ಹಿರಿಯರವರೆಗೂ ಆ ಪಟ್ಟಣದ ಮನುಷ್ಯರನ್ನು ಹೊಡೆದರು. ಅವರಿಗೆ ಗಡ್ಡೆರೋಗ ಬಂದಿತು.

10ಅವರು ದೇವರ ಮಂಜೂಷವನ್ನು ಎಕ್ರೋನಿಗೆ ಕಳುಹಿಸಿದರು.

11ಆಗ ಆ ಇಡೀ ಪಟ್ಟಣಕ್ಕೆ ಮರಣಾಂತಿಕ ವಿನಾಶ ಉಂಟಾಗಿ, ದೇವರ ಕೈ ಅಲ್ಲಿ ಮಹಾಬಾಧಕವಾಗಿದ್ದರಿಂದ ಅವರು ಫಿಲಿಷ್ಟಿಯರ ಅಧಿಪತಿಗಳೆಲ್ಲರನ್ನು ಒಟ್ಟುಗೂಡಿಸಿ, “ಇಸ್ರಾಯೇಲ್ ದೇವರ ಮಂಜೂಷವು ನಮ್ಮನ್ನೂ, ನಮ್ಮ ಜನರನ್ನೂ ಕೊಂದು ಹಾಕದ ಹಾಗೆ ನೀವು ಅದನ್ನು ಅದರ ಸ್ವಸ್ಥಳಕ್ಕೆ ತಿರುಗಿ ಹೋಗುವಂತೆ ಕಳುಹಿಸಿಬಿಡಿರಿ,” ಎಂದರು.

12ಉಳಿದವರು ಸತ್ತು ಹೋಗದೆ ಗಡ್ಡೆರೋಗದಿಂದ ಬಾಧಿತರಾದರು, ಆ ಪಟ್ಟಣದ ಗೋಳಾಟವು ಆಕಾಶಕ್ಕೆ ಮುಟ್ಟಿತು.

← 1 ಸಮುಯೇಲ 4 1 ಸಮುಯೇಲ 1 ಸಮುಯೇಲ 6 →

1 ಸಮುಯೇಲ 5 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019