We Believe JesusFé, Esperança e Nova Vida

1 ಅರಸುಗಳು 3

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · georgiano

← 1 ಅರಸುಗಳು 2 1 ಅರಸುಗಳು 1 ಅರಸುಗಳು 4 →

1ಸೊಲೊಮೋನನು ಈಜಿಪ್ಟಿನ ಅರಸನಾದ ಫರೋಹನ ಸಂಗಡ ಬಂಧುತ್ವ ಮಾಡಿ, ಫರೋಹನ ಮಗಳನ್ನು ಮದುವೆಮಾಡಿಕೊಂಡನು. ಅವನು ತನ್ನ ಮನೆಯನ್ನೂ, ಯೆಹೋವ ದೇವರ ಆಲಯವನ್ನೂ, ಯೆರೂಸಲೇಮಿನ ಗೋಡೆಯನ್ನೂ, ಸುತ್ತಲೂ ಕಟ್ಟಿ ತೀರಿಸುವ ಮಟ್ಟಿಗೂ ಅವಳನ್ನು ದಾವೀದನ ಪಟ್ಟಣದಲ್ಲಿ ತಂದು ಇಟ್ಟನು.

2ಆ ಕಾಲದವರೆಗೂ ಯೆಹೋವ ದೇವರ ಹೆಸರಿಗಾಗಿ ಆಲಯ ಇರಲಿಲ್ಲ. ಆದುದರಿಂದ, ಜನರು ಎತ್ತರದ ಸ್ಥಳಗಳಲ್ಲಿ ಬಲಿ ಅರ್ಪಿಸುತ್ತಿದ್ದರು.

3ಸೊಲೊಮೋನನು ಯೆಹೋವ ದೇವರನ್ನು ಪ್ರೀತಿಸಿ, ತನ್ನ ತಂದೆ ದಾವೀದನ ಕಟ್ಟಳೆಯಲ್ಲಿ ನಡೆಯುತ್ತಾ ಇದ್ದನು. ಆದರೂ ತಾನು ಎತ್ತರ ಸ್ಥಳಗಳಲ್ಲಿ ಬಲಿಯನ್ನೂ, ಧೂಪವನ್ನೂ ಅರ್ಪಿಸುತ್ತಾ ಇದ್ದನು.

4ಗಿಬ್ಯೋನಿನ ಅತಿಮುಖ್ಯವಾದ ಉನ್ನತ ಸ್ಥಳಕ್ಕೆ ಅರಸನಾದ ಸೊಲೊಮೋನನು ಬಲಿಗಳನ್ನರ್ಪಿಸಲು ಹೋಗಿ, ಆ ಬಲಿಪೀಠದ ಮೇಲೆ ಸಾವಿರ ದಹನಬಲಿಗಳನ್ನು ಅರ್ಪಿಸಿದನು.

5ಅವನು ಗಿಬ್ಯೋನಿನಲ್ಲಿರುವಾಗ ರಾತ್ರಿಯಲ್ಲಿ ಸ್ವಪ್ನದೊಳಗೆ ಯೆಹೋವ ದೇವರು ಸೊಲೊಮೋನನಿಗೆ ಕಾಣಿಸಿಕೊಂಡರು. ದೇವರು ಅವನಿಗೆ, “ನಾನು ನಿನಗೆ ಏನು ವರ ಕೊಡಬೇಕು? ಕೇಳಿಕೋ,” ಎಂದರು.

6ಅದಕ್ಕೆ ಸೊಲೊಮೋನನು, “ನನ್ನ ತಂದೆಯಾಗಿರುವ ನಿಮ್ಮ ಸೇವಕನಾದ ದಾವೀದನು ನಿಮ್ಮ ಮುಂದೆ ನೀತಿಯಿಂದಲೂ, ಯಥಾರ್ಥವಾದ ಹೃದಯವುಳ್ಳವನಾಗಿಯೂ ನಡೆದದ್ದರಿಂದ, ನೀವು ಅವನಿಗೆ ಮಹಾಕರುಣೆಯನ್ನು ತೋರಿಸಿದ್ದೀರಿ. ಈ ಮಹಾಕರುಣೆಯನ್ನು ಮುಂದುವರೆಸುತ್ತಾ ಈ ದಿನ ಅವನ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಮಗನನ್ನು ಕೊಟ್ಟಿದ್ದೀರಿ.

7“ಈಗ ನನ್ನ ದೇವರಾದ ಯೆಹೋವ ದೇವರೇ, ನೀವು ನನ್ನ ತಂದೆ ದಾವೀದನಿಗೆ ಬದಲಾಗಿ ನಿಮ್ಮ ಸೇವಕನನ್ನು ಅರಸನನ್ನಾಗಿ ಮಾಡಿದ್ದೀರಿ. ಆದರೆ ನಾನು ಚಿಕ್ಕ ಬಾಲಕನಾಗಿದ್ದು, ನನ್ನ ಕರ್ತವ್ಯವನ್ನು ಹೇಗೆ ನಿರ್ವಹಿಸಬೇಕೆಂದು ತಿಳಿದಿಲ್ಲ.

8ಇದಲ್ಲದೆ ನಿಮ್ಮ ಸೇವಕನಾದ ನಾನು ನೀವು ಆಯ್ದುಕೊಂಡಂಥ ಅಸಂಖ್ಯಾತ ಜನರ ಮಧ್ಯದಲ್ಲಿ ಇದ್ದೇನೆ.

9ಆದ್ದರಿಂದ ನಿಮ್ಮ ಜನರನ್ನು ಪರಿಪಾಲಿಸುವುದಕ್ಕೆ, ಒಳ್ಳೆಯದನ್ನೂ ಕೆಟ್ಟದ್ದನ್ನೂ ತಿಳಿಯುವ ಹಾಗೆ, ನಿಮ್ಮ ಸೇವಕನಿಗೆ ತಿಳುವಳಿಕೆಯುಳ್ಳ ಹೃದಯವನ್ನು ಕೊಡಬೇಕು. ಏಕೆಂದರೆ ಈ ನಿಮ್ಮ ಮಹಾಜನರ ನ್ಯಾಯತೀರಿಸುವುದಕ್ಕೆ ಸಾಮರ್ಥ್ಯವುಳ್ಳವರು ಯಾರು?” ಎಂದನು.

10ಸೊಲೊಮೋನನು ಕೇಳಿದ ಈ ಮಾತು ಯೆಹೋವ ದೇವರ ದೃಷ್ಟಿಗೆ ಒಳ್ಳೆಯದಾಗಿತ್ತು.

11ಆದ್ದರಿಂದ ದೇವರು ಅವನಿಗೆ, “ನೀನು ನಿನಗಾಗಿ ದೀರ್ಘಾಯುಷ್ಯ ಅಥವಾ ಸಂಪತ್ತನ್ನು ಕೇಳಲಿಲ್ಲ, ಅಥವಾ ನಿನ್ನ ಶತ್ರುಗಳ ಮರಣವನ್ನು ಕೇಳಿಲ್ಲ, ಆದರೆ ನ್ಯಾಯವನ್ನು ನಿರ್ವಹಿಸುವುದಕ್ಕಾಗಿ ನಿನಗೋಸ್ಕರ ವಿವೇಕವನ್ನು ಕೇಳಿದ್ದರಿಂದ,

12ನಾನು ನಿನ್ನ ಮಾತುಗಳ ಪ್ರಕಾರವೇ ಮಾಡಿದೆನು. ನಿನಗೆ ಜ್ಞಾನವನ್ನೂ, ವಿವೇಚನೆಯುಳ್ಳ ಹೃದಯವನ್ನೂ ಕೊಟ್ಟಿದ್ದೇನೆ. ನಿನಗೆ ಸಮನಾದ ಜ್ಞಾನಿಯು ಈ ಮುಂಚೆಯೂ ಇರಲಿಲ್ಲ, ನಿನ್ನ ತರುವಾಯವೂ ಇರುವುದಿಲ್ಲ.

13ನೀನು ಕೇಳದ ಐಶ್ವರ್ಯವನ್ನೂ, ಘನವನ್ನೂ ಕೊಟ್ಟಿದ್ದೇನೆ. ಆದ್ದರಿಂದ ನಿನ್ನ ಸಮಸ್ತ ದಿವಸಗಳಲ್ಲಿ ನಿನ್ನ ಹಾಗೆ ಅರಸುಗಳಲ್ಲಿ ಒಬ್ಬನೂ ಇರುವುದಿಲ್ಲ.

14ನೀನು, ನಿನ್ನ ತಂದೆ ದಾವೀದನಂತೆ ನನ್ನ ಮಾರ್ಗದಲ್ಲೇ ನಡೆದು, ನನ್ನ ಕಟ್ಟಳೆಗಳನ್ನು ಮತ್ತು ಆಜ್ಞೆಗಳನ್ನು ಕೈಗೊಂಡರೆ, ನಿನ್ನ ದಿವಸಗಳನ್ನು ಹೆಚ್ಚಿಸುವೆನು,” ಎಂದರು.

15ತರುವಾಯ ಸೊಲೊಮೋನನು ನಿದ್ರೆಯಿಂದ ಎಚ್ಚೆತ್ತಾಗ, ಅದು ಸ್ವಪ್ನವೆಂದು ತಿಳಿದುಕೊಂಡನು.

16ಇಬ್ಬರು ವೇಶ್ಯೆಯರು ಅರಸನ ಬಳಿಗೆ ಬಂದು, ಅವನ ಮುಂದೆ ನಿಂತರು.

17ಅವರಲ್ಲಿ ಒಬ್ಬಳು, “ನನ್ನ ಒಡೆಯನೇ, ನಾನೂ, ಈ ಹೆಣ್ಣು ಮಗಳು ಒಂದೇ ಮನೆಯಲ್ಲಿ ವಾಸವಾಗಿದ್ದೇವೆ.

18ನಾನು ಅವಳ ಸಂಗಡ ಮನೆಯಲ್ಲಿರುವಾಗ, ಮಗುವನ್ನು ಹೆತ್ತೆನು. ನಾನು ಹೆತ್ತ ಮೂರು ದಿವಸಗಳ ತರುವಾಯ, ಈ ಹೆಣ್ಣು ಮಗಳು ಕೂಡ ಹೆತ್ತಳು. ನಾವು ಇಬ್ಬರೂ ಕೂಡಿಯೇ ಇದ್ದೆವು. ಮನೆಯಲ್ಲಿ ನಮ್ಮ ಇಬ್ಬರ ಹೊರತು ನಮ್ಮ ಸಂಗಡ ಮತ್ತ್ಯಾರೂ ಇಲ್ಲ.

19“ಆದರೆ ಅವಳು ಕೂಸಿನ ಮೇಲೆ ಮಲಗಿದ್ದರಿಂದ, ರಾತ್ರಿಯಲ್ಲಿ ಆಕೆಯ ಮಗು ಸತ್ತು ಹೋಯಿತು.

20ಇವಳು ಮಧ್ಯರಾತ್ರಿಯಲ್ಲಿ ಎದ್ದು, ನಿನ್ನ ದಾಸಿಯು ನಿದ್ರೆಗೈಯುತ್ತಿರುವಾಗ, ನನ್ನ ಹತ್ತಿರ ಮಲಗಿದ್ದ ನನ್ನ ಮಗನನ್ನು ತೆಗೆದುಕೊಂಡು, ಅದನ್ನು ತನ್ನ ಎದೆಯ ಮೇಲೆ ಮಲಗಿಸಿಕೊಂಡು, ತನ್ನ ಸತ್ತ ಮಗುವನ್ನು ನನ್ನ ಎದೆಯ ಮೇಲೆ ಮಲಗಿಸಿದಳು.

21ಉದಯದಲ್ಲಿ ನನ್ನ ಕೂಸಿಗೆ ಹಾಲು ಕುಡಿಸಲು ಎದ್ದಾಗ, ಅದು ಸತ್ತಿತ್ತು! ಉದಯದಲ್ಲಿ ಅದನ್ನು ಕಂಡಾಗ, ಅದು ನಾನು ಹೆತ್ತ ಮಗುವಾಗಿರಲಿಲ್ಲ,” ಎಂದಳು.

22ಆಗ ಆ ಬೇರೆ ಹೆಣ್ಣು ಮಗಳು, “ಇಲ್ಲ ಬದುಕಿರುವವನು ನನ್ನ ಮಗನು, ಸತ್ತವನು ನಿನ್ನ ಮಗನು,” ಎಂದಳು.

23ಆಗ ಅರಸನು, “ ‘ಇವಳು ಬದುಕಿರುವವನು ನನ್ನ ಮಗನು, ಸತ್ತವನು ನಿನ್ನ ಮಗನು,’ ಎನ್ನುತ್ತಾಳೆ. ಅವಳು, ಹಾಗಲ್ಲ, ‘ಸತ್ತವನು ನಿನ್ನ ಮಗನು, ಬದುಕಿರುವವನು ನನ್ನ ಮಗನು,’ ಎನ್ನುತ್ತಾಳೆ,” ಎಂದು ಹೇಳಿ,

24ಅರಸನು, “ಖಡ್ಗವನ್ನು ನನ್ನ ಬಳಿಗೆ ತೆಗೆದುಕೊಂಡು ಬಾ,” ಎಂದನು. ಅವರು ಖಡ್ಗವನ್ನು ಅರಸನ ಬಳಿಗೆ ತಂದರು.

25ಆಗ ಅರಸನು, “ಬದುಕಿರುವ ಕೂಸನ್ನು ಎರಡು ತುಂಡಾಗಿ ಕಡಿದು, ಇವಳಿಗೆ ಅರ್ಧ ಪಾಲನ್ನೂ, ಅವಳಿಗೆ ಅರ್ಧ ಪಾಲನ್ನೂ ಕೊಡಿರಿ,” ಎಂದನು.

26ಆಗ ಬದುಕಿರುವ ಕೂಸಿನ ತಾಯಿಯಾಗಿರುವವಳ ಕರುಳುಗಳು ತನ್ನ ಮಗನಿಗಾಗಿ ಮರುಗಿದ್ದರಿಂದ ಅವಳು ಅರಸನಿಗೆ, “ನನ್ನ ಒಡೆಯನೇ, ಬದುಕಿರುವ ಕೂಸನ್ನು ಇವಳಿಗೆ ಕೊಡು, ಕೊಲ್ಲಬೇಡ,” ಎಂದಳು.

27ಆಗ ಅರಸನು ಉತ್ತರವಾಗಿ, “ಬದುಕಿರುವ ಕೂಸನ್ನು ಮೊದಲನೆಯವಳಿಗೆ ಕೊಡಿರಿ, ಕೊಲ್ಲಬೇಡಿರಿ, ಇವಳೇ ಅದರ ತಾಯಿ,” ಎಂದನು.

28ಅರಸನು ತೀರಿಸಿದ ನ್ಯಾಯವನ್ನು ಕುರಿತು ಸಮಸ್ತ ಇಸ್ರಾಯೇಲರು ಕೇಳಿ, ಅರಸನಿಗೆ ಭಯಪಟ್ಟರು. ಏಕೆಂದರೆ ನ್ಯಾಯತೀರಿಸಲು ಅವನಲ್ಲಿ ದೇವರ ಜ್ಞಾನವಿದೆ ಎಂದು ಕಂಡರು.

← 1 ಅರಸುಗಳು 2 1 ಅರಸುಗಳು 1 ಅರಸುಗಳು 4 →

1 ಅರಸುಗಳು 3 — georgiano:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019